ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Wednesday 5 February 2014

ವಿಧಿಯೇ ನಿನಗೆ ಧಿಕ್ಕಾರ …

ಅದೊಂದು ಪುಟ್ಟ ಕುಟುಂಬ ಗಂಡ ಹೆಂಡತಿ ಇಬ್ಬರು ಮಕ್ಕಳು.... ಅಪ್ಪ ಒಂದು ಹೋಟೆಲ್ ನ ಕೆಲಸಗಾರರಾಗಿದ್ದರು, ಅಮ್ಮ ಗೃಹಿಣಿ…ಮಕ್ಕಳಲ್ಲಿ ಮಗ ದೊಡ್ಡವನು ಎರಡನೇ ತರಗತಿ, ಮಗಳು ಯೂ ಕೆ ಜಿ........

ಕಷ್ಟ ಎಷ್ಟೇ ಇದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ಹಗಲು ರಾತ್ರಿ ದುಡಿಯುತ್ತಿದ್ದ ಅಪ್ಪ,  ದಿನವೂ ಮಕ್ಕಳಿಗೆ ಅಕ್ಷರಗಳನ್ನು ತಿದ್ದಿ ಹೇಳಿಕೊಡುತ್ತಿದ್ದ ಅಮ್ಮ....... ಹೀಗೆ ಚಿಕ್ಕ ಸಂಸಾರ ಸುಖೀ ಸಂಸಾರ ಸುಗಮವಾಗಿ ಸಾಗುತ್ತಿತ್ತು......

ಇಂತಹ ಕುಟುಂಬಕ್ಕೆ 2014ರ ಹೊಸ ವರ್ಷ ಸಂಭ್ರಮ ತರುತ್ತದೆ  ಎಂದೇ ಭಾವಿಸಿ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಹಬ್ಬಕೆ ಎಳ್ಳು ಬೆಲ್ಲವ ಬೀರಿ ನೆರೆ ಹೊರೆಯವರಿಗೆ ಹಂಚಿ ಸಂಭ್ರಮಿಸಿದ್ದರು, ಮರು ದಿನ ಬಂಧು ಬಳಗದವರಿಗೆ ಹಂಚಲು ಎಲ್ಲವ ಸಿದ್ಧತೆ ಮಾಡಿಕೊಂಡಿದ್ದರು. 

ಮಕ್ಕಳಿಬ್ಬರನ್ನು  ಶಾಲೆಗೆ ಬಿಟ್ಟು ಅಲ್ಲಿಂದಲೇ ತಮ್ಮ ಸಹೋದರ ಸಂಬಂಧಿ ಊರಿಗೆ ಹೊರಟರುತನ್ನೂರಿನಿಂದ 30-35 ಕಿಲೋ ಮೀಟರ್ ದೂರದ ಒಂದು ಗ್ರಾಮಕ್ಕೆ ಹೋಗಿ ಸಭ್ರಮದಿಂದಲೇ ಎಳ್ಳು ಬೆಲ್ಲ ಕೊಟ್ಟು ಸಂಕ್ರಾಂತಿಯ ಶುಭ ಕೋರಿ ಎಲ್ಲರೊಡನೆ ಕಾಲ ಕಳೆದು ಊಟ ಮುಗಿಸಿ  ಮರಳಿ ಹೊರಟರು …….

ಹೊರಟ ಹತ್ತು ಹದಿನೈದು ನಿಮಿಷದಲ್ಲೇ ಬರಸಿಡಿಲಿನಂತೆ  ಬಂದು ಡಿಕ್ಕಿ ಹೊಡೆದಿತ್ತು ಯಮ ಸ್ವರೂಪಿ ಲಾರಿ ……….   ಅಪಘಾತದ ರಭಸಕ್ಕೆ ಪತಿ ಸ್ಥಳದಲ್ಲೇ ಮೃತ ಪಟ್ಟಿದ್ದರು …..  :(  ಆಂಬ್ಯುಲೆನ್ಸ್ ಸಹಾಯ ದಿಂದ  ಪತ್ನಿಯನ್ನು  ಆಸ್ಪತ್ರೆಗೆ ದಾಖಲಿಸಲಾಯಿತು  ಸ್ಥಿತಿ ಚಿಂತಾಜನಕವಾಗಿತ್ತು ………… L

ಮರುದಿನ ಪತ್ನಿಗೆ ಪ್ರಜ್ಞೆ ಬಂದಿತ್ತು ಆದರೆ ಆಘಾತವಾಗಬಹುದು ಎಂಬ ಕಾರಣದಿಂದ ಪತಿಯ ಮರಣದ ಸುದ್ದಿ ಹೇಳದೆ ಅಂತ್ಯಕ್ರಿಯೆ ನಡೆಸಲಾಯಿತು ……. ಆಕೆಯ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದಿತ್ತು  ಆದರೆ ಸುಧಾರಣೆಯಾಗುವುದೆಂಬ ಭರವಸೆ ಸಿಕ್ಕಿತ್ತು …….. ಆದರೆ ಮೂರು ದಿನಗಳ ನಂತರ  ಇಬ್ಬರೂ ಮಕ್ಕಳನ್ನು ಅನಾಥರಾಗಿಸಿ ಅವರೂ ಇಹ ಲೋಕ ತ್ಯಜಿಸಿದರು ……….

ಈಗ ಆ ಇಬ್ಬರು ಮಕ್ಕಳ ಸ್ಥಿತಿ ನೆನೆದು ಮನಸು ಭಾರವಾಗಿದೆ, ಇಬ್ಬರೂ ನಾನು ಕೆಲಸ ಮಾಡುತ್ತಿರುವ ಶಾಲೆಯ ವಿದ್ಯಾರ್ಥಿಗಳೇ ……. ಇನ್ನೂ ಪುಟಾಣಿ ಕಂದಮ್ಮಗಳು

ಓ ವಿಧಿಯೇ ನಿನಗೆ ಕರುಣೆಯೇ ಇಲ್ಲವ ? ಲೋಕ ಜ್ಞಾನವೇ ಅರಿಯದ ಮಕ್ಕಳನ್ನು ಹೆತ್ತವರಿಂದ ದೂರ ಮಾಡಿ ವಿಕಟ ಸಂತಸ ಪಡುವ ನಿನ್ನ ಬುದ್ಧಿಗೆ ಧಿಕ್ಕಾರವಿರಲಿ ………..