ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Monday 13 January 2014

ಅಸ್ಪಷ್ಟ.... ಅದೂ ಅರ್ಧಂಬರ್ಧ



ಬಡಕಲು ದೇಹದ ಬಡವ ನಾನು
ನನ್ನ ಗುಡಿಸಲೇ ನನ್ನರಮನೆಯು
ಸಗಣಿ ಸಾರಿಸಿದ ನೆಲವೇ ನನ್ನ
ರತ್ನಗಂಬಳಿಯ ಹಾಸುದಾರಿಯೂ
ಹರಕು ಚಾಪೆಯೇ ನನ್ನ ಹಾಸಿಗೆಯು 
ಮುರುಕು ಕಿಟಕಿಯೇ ಗಾಳಿಯಂತ್ರವು
ಬುಡ್ಡಿ ದೀಪದ ಬೆಳಕೇ ಸ್ವರ್ಗದ ಸಿರಿಯು
ಹೊದ್ದುಕೊಳ್ಳುವ ಹೊದಿಕೆಗೆ ಗತಿ ಇಲ್ಲದಿದ್ದರೂ
ಕಣ್ಣೊಳಗೆ ಕಾಡುವ ಕನಸುಗಳಿಗೇನು ಕೊರತೆಯಿಲ್ಲ 
ಮನದೊಳಗೆ ಮೂಡುವ ಭಾವನೆಗಳಿಗೇನು ಕಡಿಮೆ ಇಲ್ಲ...........

Friday 10 January 2014

ಬಡವಿಯೊಡಲುರಿ ...........


ನನ್ನ ಅಚ್ಚು ಮೆಚ್ಚಿನ ಲೇಖಕರಲ್ಲಿ ಒಬ್ಬರಾದ ಹಾ ಮಾ ನಾಯಕ್ ಅವರ ಸಂಗತಿ ಎನ್ನುವ ಪ್ರಬಂಧ ಸಂಕಲನದಲ್ಲಿ  ‘ಮಹಾಕಾವ್ಯ ಜೀವನಎನ್ನುವ ಒಂದು ಸಂಗತಿಯು ನನ್ನನ್ನು ಬಹಳವಾಗಿ ಕಾಡಿತು….. ಇದರಲ್ಲಿ ಉತ್ತರ ಕರ್ನಾಟಕದ ಬಡ ಜನರ ಬವಣೆಯ ಬದುಕಿನ ಇನ್ನೊಂದು ಚಿತ್ರಣ ಅನಾವರಣಗೊಳ್ಳುತ್ತದೆ……. ಅದನ್ನು ಓದಿದ ಮೇಲೆ ಕಣ್ಣಂಚಲ್ಲಿ ಒಂದು ಹನಿ ಕಣ್ಣೀರ ಜಿನುಗಿದಂತೆ ಭಾವ…….
ಈ ಒಂದು ಪ್ರಬಂಧ ಹತ್ತಾರು ಜನರನ್ನು ತಲುಪಲಿ ಎನ್ನುವ ಆಶಯದಿಂದ ಇಲ್ಲಿ ಪ್ರಕಟಿಸುತ್ತಿದ್ದೇನೆಇದರ ಮೂಲಕ ಲೇಖಕರಿಗೆ ಮತ್ತು  ಪ್ರಕಾಶಕರಿಗೆ ಪ್ರೀತಿಯಿಂದ ಧನ್ಯವಾದ ತಿಳಿಸುತ್ತೇನೆ…… 

ಅವರ ಪ್ರಬಂಧ ನೋಡಿ ಕಲ್ಪನೆ ಮಾಡಿ ಬರೆದ  ಕವನ ಇದು....

ಬಡವಿಯೊಡಲುರಿ ...........

ಬೆಳಗಾಗೆದ್ದು ಉಟ್ಟುಡುಗೆಯಲೇ
ಬೆಟ್ಟ ಗುಡ್ಡಗಳ ಕಡೆಗೆ ನಡೆದು
ದೂರದ ಬಯಲು ದಾರಿಯಲಿ ಸಾಗಿ
ಹತ್ತು ಹಲವೆಡೆ ಸುತ್ತಿ ಅಲೆದು

ಸಿಕ್ಕ ಉರುವಲುಗಳ ಒಟ್ಟುಗೂಡಿಸಿ
ಇದ್ದ ದಾರವ ಹಗ್ಗವಾಗಿಸಿ ಬಿಗಿದು
ಕಟ್ಟನದನು ಶಿರದ ಮೇಲಕೇರಿಸಿ
ಮನದ ಭಾರದ ಮುಂದೆ ಹೆಗಲ
ಭಾರವ ಮರೆತು ನಡೆಯುತ ಸಾಗುತಿರಲು

ಬೀಸಿತೊಂದು ಗಾಳಿ, ಮಿಂಚಿತೊಂದು ಮಿಂಚು,
ಬಡಿಯಿತೊಂದು ಸಿಡಿಲು, ಭೋರ್ಗರೆಯಿತು ಮಳೆ
ವರ್ಷಧಾರೆಯ ನಡುವೆ ಸಿಲುಕಿ ನಡುಗಿ ನಡೆಯುತಾ
ಗಮ್ಯ ತಲುಪುವ ಹೊತ್ತಿಗೆ ಕತ್ತಲಾಯಿತು

ಹೊತ್ತು ತಂದ ಹೊರೆಯ ಇಳಿಸಿ ಕಟ್ಟಿದ್ದ ದಾರವ
ಬಿಚ್ಚಿ ನೋಡಲು ಕಟ್ಟಿಗೆಯೆಲ್ಲವು ನೆನೆದು
ಹಸಿಯಾಗಿಹುದ ಕಂಡೊಡನೆ ತೊಯ್ದ ಮಳೆ
ಹನಿಯ ಜೊತೆಗೂಡಿತು ಕಣ್ಣಂಚಿನ ಕಣ್ಣೀರು

ಬವಣೆ ಪಟ್ಟು ಒಟ್ಟುಗೂಡಿಸಿ ಕಟ್ಟಿ ತಂದ
ಕಟ್ಟಿಗೆಯಲಿ ಹೊತ್ತಿನ ಕೂಳಿನ ತುತ್ತನು
ಅಟ್ಟು ಉಣ್ಣಲಾಗದಂತೆ ಮಾಡಿದ ಕಟುಕ
ವಿಧಿಯ ಕುಹಕ ಬುದ್ಧಿಗೆ ಹಿಡಿ ಶಾಪವಿರಲಿ ......

Thursday 9 January 2014

ಕಾಶ್ಮೀರ... ! ತಣ್ಣಗೆ ಕಾಣು(ಡು)ವ ಜ್ವಾಲಾಮುಖಿ!!



ಅವರವರ
ಭಾವಕ್ಕೆ ತಕ್ಕಂತೆ…….. ದೂರದ ಬೆಟ್ಟ ನುಣ್ಣಗೆ !
ಪ್ರೇಮಿಗಳಿಬ್ಬರ ನಡುವಿನ ಮಾತು ಕಥೆ :- ಓ  ಕಾಶ್ಮೀರ ನೀನೆಷ್ಟು ಸುಂದರ! ಅದ್ಭುತ ರಮಣೀಯ…. ನೀ ನಿಸರ್ಗದ ಸ್ವರ್ಗ, ನಿನ್ನ ಮಡಿಲಲ್ಲಿ ನಾವಿಬ್ಬರು ಬಾಹುಬಂಧನದಲ್ಲಿ ಒಂದಾಗಿರುವಾಗ ನಿನಗಿಂತ ಬೇರೆ ಸ್ವರ್ಗ ಇನ್ನೊಂದಿಲ್ಲ, ನಮ್ಮಂತಹ ಸಹಸ್ರ ಸಹಸ್ರ ಪ್ರೇಮಿಗಳಿಗೆ ನೀನು ಸುಖ ನಿದ್ರೆಯ ನೀಡಿರುವೆ ಆ ತೃಪ್ತಿ ಅವಿಸ್ಮರಣೀಯ!  ನಿನ್ನ ಪ್ರೀತಿಗೆ ನಾವು ಚಿರ ಋಣಿ ಜೈ ಹಿಂದ್ ಜೈ ಭಾರತ ಮುಕುಟವೇ….

ಅತ್ತ ಯೋಧರಿಬ್ಬರ ಮಾತುಕತೆ :-  ಓಹ್ ಕಾಶ್ಮೀರಾ ನೀನೆಷ್ಟು ಘೋರ? ರೌದ್ರ ರಮಣೀಯನೀ ನಿಸರ್ಗದ ನರಕ , ನಿನ್ನ ಗಡಿಯಲ್ಲಿ ನಾವು ನಿಂತಿರುವಾಗ ನರಕದ ಇನ್ನೊಂದು ಮುಖದ ದರ್ಶನ ನಮಗಾದಂತೆ. ನಮಗೆ ನಿನಗಿಂತ ನರಕ ಸದೃಶ ಜಗತ್ತು ಇನ್ನೊಂದಿಲ್ಲ ಎಂದೆನಿಸುತ್ತಿದೆ, ನಿನ್ನ ಉಳಿವಿಗಾಗಿ ಸಹಸ್ರ ಸಹಸ್ರ ಜನರು ನಿನ್ನ ಮಡಿಲಲ್ಲಿ ಚಿರ ನಿದ್ರೆಗೆ ಜಾರಿಹರು  ನಿನ್ನ ಪಾದಕೆ ನಮ್ಮ ಪ್ರಾಣ ಪಣವಾಗಿದೆ ಜೈ ಹಿಂದ್ ಜೈ ಭಾರತ ಮುಕುಟವೇ

ಈ ಕಾಲ್ಪನಿಕ ಮಾತು ಕಥೆಗಳ ಹಿಂದಿರುವ ಕಾಶ್ಮೀರದ  'ಎರಡು ಮುಖದ ಭಾವಗಳನ್ನುಅಂತರಂಗಕ್ಕೆ ತೋಚಿದ ಹಾಗೆ ಅಕ್ಷರ ಪದಪುಂಜಗಳಲ್ಲಿ ಹಿಡಿದಿಡುವ ಒಂದು ಪ್ರಯತ್ನ ಈ ಅಂತರಂಗದಿಂದ”……

>>>>>>>>>>>>>>>>>>>>>>>>>>>>>>>>>>>>>>>>>>>>>>>
ಸುಂದರ ಭಾವ ಕಾಶ್ಮೀರ......
ದೂರದಿಂದ ನೋಡುವವರಿಗೆ ಇದು ಮಂಜಿನಿಂದ ಸ್ವರ್ಗ ಧರೆಗಿಳಿದಂತೆ ಕಾಣುವ ಲೋಕದ ಜಾಗ….. ಪ್ರೇಮಿಗಳ ಪಾಲಿನ ಪ್ರೇಮಲೋಕ………. ನವ ವಧು ವರರ ಪಾಲಿಗೆ ಸ್ವರ್ಗಲೋಕ……….  

ನಲ್ಲ ನಲ್ಲೆಯರು ಜೊತೆ ಜೊತೆಗೆ ನಡೆವ, ಬಿಸಿಯಪ್ಪುಗೆಗೆ ಹಾತೊರೆಯುವ ಸ್ಥಳ….. ರಕ್ತದ ಕಣ ಕಣದಲ್ಲೂ ಬಿಸಿಯೇರಿಸುವ ಜಾಗ ಬಿಸಿಯುಸಿರ ಮಿಲನಕ್ಕೆ ರೋಮಾಂಚಿತವಾಗುವ ಸ್ಥಳ….. ಮೋಡಗಳ ಮುಟ್ಟುವಷ್ಟು ಎತ್ತರಕ್ಕೆ ಏರಿ ಜಗತ್ತನ್ನೇ ಗೆದ್ದೇ ಬಿಟ್ಟಷ್ಟು ಸಂತಸ ಪಡುವ ಪ್ರದೇಶ……….

ಜೀವಕ್ಕೆ ಜೀವವೆನಿಸುವ ಪ್ರೇಮಿಗಳಿಗೆ ಸ್ವರ್ಗ ಸೌಂದರ್ಯ ಸೋಪಾನ……….  ಬಿರಿದ ಮೊಗ್ಗಿನ ಮೇಲೆ, ಅರಳಿದ ಹೂಗಳ ಮೇಲೆ ಮಂಜಿನ ಬಿಂದುಗಳ ಕಂಡಾಗ ಹೃದಯಾಂತರಾಳದಿ ನದಿ ಹರಿದಷ್ಟು ರೋಮಾಂಚನ....

ಕಣ್ಣು ಹಾಯಿಸಿದಷ್ಟೂ ಎತ್ತರಕೆ ಕಾಣುವ ಆಗಸವ ನೋಡಿ ಗಂಟಲು ಹರಿಯುವಷ್ಟು ಕಿರುಚಿ ಖುಷಿ  ಪಡುವ ಸಮಯ ಆನಂದಮಯ…….

ದೂರದಲ್ಲಿರುವ  ಬಂಧು ಬಾಂಧವರು/ ಸ್ನೇಹಿತರು ಇಲ್ಲಿಗೆ ಹೋದವರನು ನೆನೆದು ಸಂತಸ ಪಡುವ ಕಾರಣವಾಗುವ ಸ್ಥಳ,

ಬಾಳ ಪಯಣದ ಸಂಗಾತಿಯ ಜೊತೆಗೂಡಿ ಹೆಜ್ಜೆ ಇಡುವಾಗ  ಇನ್ನಾವ ಗೊಡವೆಯ ಚಿಂತೆ ನಮಗೇಕೆ ಎನ್ನುವ ಭಾವ
ಇಲ್ಲಿರುವ ಪ್ರತೀ ಗಂಟೆಯೂ  ಒಂದೊಂದು ಕ್ಷದಂತೆ ಕಳೆದ ಭಾವ, ನಿಲ್ಲು ಕಾಲವೇ ನಿಲ್ಲು ನನ್ನ ನಲ್ಲೆ  ಜೊತೆಗಿರುವಾಗ ಓಡಬೇಡ ತೆವಳುತ್ತಾ ಸಾಗು ಎನ್ನುವಂತೆ ಕೇಳಿಕೊಳ್ಳುವ ಮಧುರ ಚಿಂತನೆ…….

ಪ್ರೀತಿ ಧ್ಯೋತಕದ ಪ್ರತೀಕವಾದ ಪ್ರಕೃತಿಯ ಮಡಿಲಲ್ಲಿ ಜಗದ ಎಲ್ಲ ಭಾವಗಳನ್ನು ಮರೆತು ತಂಪು ತಂಪಾಗಿ ಹರಿವ ಝರಿಯಲಿ ಬೀಳುವ ನೀರನು ಕಂಡಾಗಾ ರೋಮಾಂಚನ
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>
ಯಾತನಾ ಭಾವ ಕಾಶ್ಮೀರ......
ಆದರೆ ಹತ್ತಿರದಿಂದ ನೋಡಿದಾಗ ಮಾತ್ರ ತಿಳಿಯುವುದು ಅದು ತಣ್ಣಗೆ ಕಾಣುವ ಜ್ವಾಲಾಮುಖಿ ಎಂದು…… ಮದ್ದು ಗುಂಡು ಬಂದೂಕು, ಸ್ಪೋಟಕಗಳಿಂದ ಹನಿಗಳಿಂದ ಕೂಡಿದ ನರಕ ಲೋಕ ಎಂದು ….. ಬಾಳ  ಪಯಣದ ಜೊತೆಗಾರನ   ಸಂಗಾತಿಯಿಂದ ದೂರ ಮಾಡುವ ಸ್ಥಳ……. 

ದೂರದಲ್ಲಿರುವ  ಬಂಧು ಬಾಂಧವರು/ ಸ್ನೇಹಿತರು  ಇಲ್ಲಿಹರನು ನೆನೆದು ನಿಟ್ಟುಸಿರ ಬಿಡುವಿಕೆಗೆ ಕಾರಣವಾಗುವ ಸ್ಥಳ……   ರಕ್ತದ ಕಣ ಕಣವನ್ನೂ ಹೆಪ್ಪುಗಟ್ಟಿಸುವ ಜಾಗ…….  ನಮ್ಮ ದೇಶದ ಇಂಚಿಂಚನ್ನೂ ಬಿಟ್ಟುಕೊಡಲಾಗದೆ ಕಾದು ಕುಳಿತ ಪ್ರದೇಶ…….  

ಜೀವದ ಹಂಗನ್ನು ತೊರೆದು ಜೀವಕ್ಕಿಂತ ಹೆಚ್ಚಾದ ದೇಶ ರಕ್ಷಣೆಯೇ ಯೋಧರ ಜೀವನ…..  ಚಿಗುರಲ್ಲೇ ಉದುರಿಬಿದ್ದ ಮೊಗ್ಗಿನ ಮೇಲೆ,  ಬಂದೂಕಿನ ನಳಿಕೆಯ ಬಿಸಿಗೆ ಬಾಡಿದ ಹೂವುಗಳ ಮೇಲಿನ ರಕ್ತದ ಕಲೆ ಕಂಡಾಗ ಹೃದಯ ಹಿಂಡಿದ ಯಾತನೆ……. 

 ಮನದ ನೋವ ಯಾರಲ್ಲೂ ಹೇಳಲಾಗದೆ ಎತ್ತರದ ಗಸವ ನೋಡಿ ಶಬ್ಧವ ಹೊರಡಿಸಲಾಗದೆ ಮನದಲ್ಲೇ ಕೊರಗುವ ಸಮಯ ಯಾತನಾಮಯ……….

ಬಾಳ ಪಯಣದ ಹಾದಿಯಲಿ ಜೊತೆಗೂಡಿದ ಸಂಗಾತಿಯ ಬಿಟ್ಟು ಬಂದು ದೇಶ ಸೇವೆಯೇ ಮೇಲು ಎಂದು ಗಡಿ ಕಾದು ಕುಳಿತ ದೇಶದ ಗೊಡವೆಯು ನಮ್ಮದು ಎನ್ನುವ ಭಾವ.....
ಇಲ್ಲಿ  ಕಳೆ ಪ್ರತೀ ಗಂಟೆಯೂ ಒಂದೊಂದು ದಿನ ಕಳೆದಂತೆ ಕಳೆಯಲಾಗದ ಭಾವ ….. ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು …. ಓಡು ಕಾಲವೇ ಓಡು ನನ್ನ ನಲ್ಲೆಯ ಸೇರುವ ಸಮಯದವರೆಗೆ ಎನ್ನುವ ಯಾತನೆ…..

ಇಲ್ಲಿ ಸಿಡಿದ ಮದ್ದುಗಳ ನಡುವೆ ಸಿಲುಕಿ ಸಿಡಿದ ದೇಹದಿಂದ ಸುರಿದ ನೆತ್ತರ ಕೋಡಿಯ ಹರಿವು ಬದುಕಿರುವ ನಮ್ಮ ನೆತ್ತರನ್ನೂ ಹೆಪ್ಪುಗಟ್ಟಿಸುವಂತಿದೆ

………………………………
..... <><><><><><>…………………………………

ಒಂದು ಭೂಮಿಯ ಗಡಿ
ಭಾಗದ ಉಳಿವಿಕೆಗಾಗಿ
ಎರಡು ದೇಶಗಳ
ನಡುವೆ
ನಡೆವ ಘೋರ ಯುದ್ಧದಿ
ಮಡಿದವರ ಸಂಖ್ಯೆ ಸಹಸ್ರ ಸಹಸ್ರ
…….

ಅದೇ ಗಡಿಯಲಿ

ಬೆಳೆದ ಹೂವ ನಲ್ಲೆಯ
ಮುಡಿಗೇರಿಸಿ ನಲಿದವರೂ
ಸಹ ಸಹಸ್ರ ಸಹಸ್ರ
….

ಕೊನೆಗೆ ಅನಿಸಿದ್ದು "ಕಾಶ್ಮೀರ ಪ್ರೇಮಿಗಳ ಪಾಲಿನದು ಮಾತ್ರ
ಆಗುವುದು ಸಾಧ್ಯವಿಲ್ಲವೇ?" 
ಈ ಹೋರಾಟಕ್ಕೆ ಕೊನೆಯಿಲ್ಲವೇ?????