ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Tuesday 14 April 2015

ಹತ್ತು ಜನರಿಂದ ಒಂದೊಂದು ತುತ್ತು….. ಇದು ನನ್ನ ಬಾಲ್ಯದ ಕನಸು…...



ಅದು ಸಾವಿರದಾ ಒಂಬೈನೂರ ತೊಂಬತ್ತೆರಡನೆ ಇಸವಿ (1992) ಅಂದರೆ ಸರಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ! ನಾನಾಗ ನಾಲ್ಕನೇ ತರಗತಿ ಓದುತ್ತಿದ್ದೆ ಮನೆಯಿಂದ ಶಾಲೆಗೆ 5 ಕಿ ಮೀ ಪಯಣ, ಈಗಿನಂತೆ ಬಸ್ಸಿರಲಿಲ್ಲಾ, ಆಟೋ ಇರಲಿಲ್ಲ, ಆಟೋ ಇದ್ದರೂ ಬಡವರ ಕೈಗೆಟುಕುವಂತಿರಲಿಲ್ಲ ಹಾಗೂ ಇತರೆ ವಾಹನವಿಲ್ಲ. ನಡೆದುಕೊಂಡೇ ಶಾಲೆಗೆ ಹೋಗಬೇಕು,  ನಡೆದುಕೊಂಡೆ ಮನೆಗೆ ವಾಪಸ್ ಬರಬೇಕು. ಅದೂ ಬರಿಗಾಲಿನಲ್ಲಿ! ಬಿಸಿಲುಗಾಲದಲ್ಲಿ ಪ್ರತಿ ಹೆಜ್ಜೆ ಇಡಬೇಕಾದರೆ ಕಣ್ಣು ತುಂಬಿ ಬರುತ್ತಿತ್ತು….
ಆ ದಿನಗಳಲ್ಲಿ ಒಂದು ದಿನ ಎಂದಿನ ಶನಿವಾರದಂತೆ ಅರ್ಧ ದಿನದ ತರಗತಿ ಮುಗಿಸಿಕೊಂಡು ಬಿರು ಬಿಸಿಲಿನಲ್ಲಿ ನಡೆದು ಸಾಗುವಾಗ ಅರ್ಧ ದಾರಿ ಕ್ರಮಿಸಲಷ್ಟೇ ಸಾಧ್ಯವಾದದ್ದು, ಕಾಲುಗಳು ಸುಟ್ಟು ಹೆಜ್ಜೆ ಇಡಲಾಗದೆ ಕ್ಷಣ ಕ್ಷಣಕ್ಕೂ ನರಕ ಯಾತನೆಯ ಅನುಭವಿಸಿದಂತಾಗುತಿತ್ತು ಹಾಗೂ ಹೀಗೂ ಮಾಡಿ ಮನೆ ಸೇರಿದ್ದು ಆಯಿತು……
ಆ ದಿನ ಹೆಜ್ಜೆ ಇಡಲಾಗದೆ ಸುಸ್ತಾಗಿ ಕುಳಿತಾಗ ಗಟ್ಟಿಯಾಗಿ ಮಾಡಿದ ಒಂದು ನಿರ್ಧಾರ ಅಂದರೆ ಸಾಧ್ಯವಾದರೆ ಮುಂದೊಂದು ದಿನ ನಾನು ದೊಡ್ಡವನಾದ ಮೇಲೆ ನನ್ನಂತೆ ಬರಿಗಾಲಲ್ಲಿ ನಡೆವ ಒಂದು ಮಗುವಿಗಾದರೂ ಚಪ್ಪಲಿ ಕೊಡಿಸಬೇಕು……….. ಅಲ್ಲಿಂದ ಅದು ಪ್ರತಿ ನಿತ್ಯದ ಕನಸೇ ಆಗಿ ಹೋಯಿತು ಆ ಕನಸಲ್ಲಿ ನನ್ನ ನೋವು ಮರೆತೇ ಹೋಗಿತ್ತು………..!!
ಬರೀ ಪಾದರಕ್ಷೆಯ ಸಮಸ್ಯೆ ಮಾತ್ರವಲ್ಲ ನಮ್ಮ ಬದುಕು ಅದನ್ನೂ ಮೀರಿದ ಹತ್ತು ಹಲವು ನೋವುಗಳಿದ್ದವು ಅವುಗಳಲ್ಲಿ ಕೆಲವು ಇಂದಿಗೂ ಮನದಲ್ಲಿ ಜೀವಂತ, ಇತರ ನಮಗಿಂತ ಸಿರಿವಂತರ ಮಕ್ಕಳು ಓದಿ ಬರೆದು ಮುಗಿಸಿದ ಪುಸ್ತಕದಲ್ಲಿ ಉಳಿದ ಹಾಳೆಗಳನ್ನು ಪಡೆದು ಅದನ್ನು ಒಟ್ಟುಗೂಡಿಸಿ ಅದಕ್ಕೆ ದಾರದಿಂದ ಹೊಲಿಗೆ ಹಾಕಿ ಪುಸ್ತಕದ ರೀತಿ ಮಾಡಿ ನೋಟ್ಸ್‌ಗಳನ್ನು ಪೂರ್ಣಗೊಳಿಸಿದ ಹತ್ತಾರು ಉದಾಹರಣೆಗಳು ಮನದಲ್ಲಿ ಹಚ್ಚ ಹಸಿರಾಗಿದ್ದು, ಇಂದಿಗೂ ಕಣ್ಣಲ್ಲಿ ನೀರು ತರಿಸುತ್ತವೆ.
ಹರಿದ ಅಂಗಿಯ ಉಟ್ಟು, ಕೊಳಕು ಚಡ್ಡಿಯ ತೊಟ್ಟು, ದಾರಿಯಲಿ ನಡೆವಾಗ ಹಣವಂತರ ಮಕ್ಕಳು ಅಣಕಿಸಿದ್ದು ಇನ್ನೂ ಹಸಿ ಹಸಿಯಾಗಿಯೇ ನೆನಪಿದೆ.
ಇದೆಲ್ಲಾ ನನ್ನ ಬದುಕಿನ ಪುಟಗಳಲಿ ಅಚ್ಚಳಿಯದೆ ಉಳಿದ ನೆನಪುಗಳ ಕಲಾಕೃತಿಗಳು ಅಂದರೂ ತಪ್ಪಲ್ಲ.......
...............................................................

ಈಗ ಕಾಲ ಬದಲಾಗಿದೆಮಕ್ಕಳು ಶಾಲೆಗೆ ಹೋಗಲು ಬೇಕಾದಷ್ಟು ಬಸ್ಸುಗಳಿವೆಅದೇ ಶಾಲೆಗಳ ವಾಹನಗಳೂ ಇವೆಆಟೋ ಇದೆ,ಮನೆ ಮನೆಗಳಲ್ಲೂ ಬೈಕುಕಾರುಗಳಿವೆ…. ಆದರೂ ಕೆಲವು ಹಿಂದುಳಿದ ಹಳ್ಳಿಗಳಲ್ಲಿ ಮಕ್ಕಳು ಸೌಲಭ್ಯ ವಂಚಿತರಾಗಿಯೇ ಇದ್ದಾರೆ.  ಅಂತಹ ಲಕ್ಷಾಂತರ ಮಕ್ಕಳಲ್ಲಿ ಹತ್ತಾರು ಮಕ್ಕಳಿಗಾದರೂ ನಮ್ಮ ಕೈಲಾದ ಸಹಾಯ ಮಾಡಬೇಕು ಅನ್ನುವ ಆಶಯದಿಂದ ರೂಪ ತಳೆದ ತಂಡವೇ ಹತ್ತು ಜನರಿಂದ ಒಂದೊಂದು ತುತ್ತು…..!
ಹತ್ತು ಜನರಿಂದ ಒಂದು ತುತ್ತು….. ಈ ಪರಿಕಲ್ಪನೆ ಹುಟ್ಟಿಕೊಂಡದ್ದೇ ವಿಸ್ಮಯ.....
ಉಳ್ಳವರಿಂದ ಪಡೆದು ಇಲ್ಲದವರಿಗೆ ಕೊಡಬೇಕು” ಸಮಾಜಕ್ಕೆ ನಮ್ಮದೇ ಏನಾದರೂ ಕೊಡುಗೆ ಕೊಡಬೇಕು ಎಂಬ ಆಶಯ ಚಿಕ್ಕ ವಯಸಿನ ಮನಸಲ್ಲಿ ಇದ್ದ ದೊಡ್ಡ ಆಸೆಗೆ ಕಾಲ ಕೂಡಿ ಬಂದಿತು. 
ಆ ಕನಸುಗಳು ಕೈಗೂಡಲು ತೆಗೆದುಕೊಂಡ ಕಾಲ ಇಪ್ಪತ್ತು ವರ್ಷಗಳು.!
ನನ್ನ ಕಣ್ಣ ಸಣ್ಣ ಕನಸ ನನಸು ಮಾಡಲು ನಾ ಆಯ್ಕೆ ಮಾಡಿಕೊಂಡ ಸ್ಥಳವೇ ಸಾಮಾಜಿಕ ತಾಣಗಳು...... ಈ ಸಾಮಾಜಿಕ ತಾಣಗಳಿಂದಾಗಿ ನೂರಾರು ಸ್ನೇಹಿತರು ಸಿಕ್ಕಿ ನನ್ನ ಕನಸನ್ನು ನನಸು ಮಾಡಲು ಸಹಾಯ ಹಸ್ತ ಚಾಚಿದರು ಆ ಎಲ್ಲರಿಗೂ ನಾ ಚಿರಋಣಿ.... 
ಆದರೆ ಅಂದು ಅಂದುಕೊಂಡದ್ದನ್ನು ನೂರು ರೂಪಾಯಿಯಲ್ಲಿ ೧ ಪೈಸದಷ್ಟಾದರೂ ಸಾಧಿಸಿದ್ದೇನೆ ಅನ್ನೋ ಆತ್ಮ ತೃಪ್ತಿ ನನ್ನ ಮನಸಲ್ಲಿದೆ..... 

ಆದರೆ ಸಾಗಬೇಕಾದ ದಾರಿ ಸಾವಿರ ಮೈಲಿಗಿಂತ ದೊಡ್ಡದಿದೆ ..........