ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Monday 25 August 2014

ಮೂಕ ಸಂವೇದನೆ.....

ನಾ ಕಂಡ ಮುಗ್ಧ ಮನಸಿನ ಗೆಳತಿಯ ಅಂತರಂಗದ ಮೂಕ ಸಂವೇದನೆಯ  ಗ್ರಹಿಕೆಯ ಅನಾವರಣ ಇಲ್ಲಿದೆ..... ತೋಚಿದಂತೆ ಗೀಚಿರುವೆ  ತಪ್ಪು ಒಪ್ಪುಗಳನ್ನು ತಿದ್ದಿ ಓದಿಕೊಳ್ಳಿ.... - ಸ. ಬಿ. ಕ

ಚಿತ್ರ : ಅಂತರ್ಜಾಲ ಕೃಪೆ 

ಅಪ್ಪಾ ನನ್ ಜೀವನದಲ್ಲಿ ಹುಟ್ಟಿನಿಂದ ಇಲ್ಲೀವರೆಗೊ ನೀವು  ಹಾಕಿದ ಒಂದು ಗೆರೆಯನ್ನೂ ದಾಟಿದವಳಲ್ಲ ನಾನು.......

ಇಷ್ಟು ದಿನ ನಿಮ್ಮ ಮೇಲಿದ್ದ ಅಭಿಮಾನದ ಆಶಾ ಗೋಪುರ ಕಳಚಿ ನಾ ನಿಂತ ಜಾಗದಲ್ಲೇ ಕುಸಿದು ಪಾತಾಳಕ್ಕೆ ಮುಳುಗಿದಂತೆ ಆಯಿತು...... ಇಪ್ಪತ್ತು ವರ್ಷಗಳಿಂದ ನಾನು ನನ್ನೊಳಗೆ ಬೆಳೆಸಿಕೊಂಡು ಬಂದಿದ್ದ ಭಾವನೆಗಳನ್ನು ಈ ಇಪ್ಪತ್ತು ದಿನಗಳಲ್ಲಿ ಅದರಲ್ಲೂ ಕೊನೆಯ ಈ ಇಪ್ಪತ್ತು ನಿಮಿಷಗಳಲ್ಲಿ ನುಚ್ಚು ನೂರು ಮಾಡಿಬಿಟ್ಟಿರಿ......

ನಿಜ ಅಪ್ಪಾ ನಾನು ಭಾವಿಯೊಳಗಿನ ಕಪ್ಪೆ, ನನಗೆ ಈ ಜಗತ್ತಿನ ಅರಿವಿಲ್ಲ ನಿಜ ಆದರೆ ಈ ಭಾವಿಯೊಳಗಿಂದ ಆಚೆ ಕಣ್ಣು ಹಾಯಿಸಲು ಸ್ವತಂತ್ರ ನೀಡದೇ ಇದ್ದವರೊ ನೀವೇ ನೆನಪಿರಲಿ..... ಇಂದು ನಿನಗೆ ಯಾವುದರಲ್ಲ್ಲೂ ಯೋಗ್ಯತೆ ಇಲ್ಲ ಎಂದು ಹೇಳುತ್ತಿರುವವರೂ ನೀವೇ...

ಉನ್ನತ ವಿದ್ಯಾಭ್ಯಾಸ ಮಾಡಿ ನನ್ನ ಕಾಲ ಮೇಲೆ ನಾನು ನಿಂತು ಬದುಕನ್ನು ಮುನ್ನಡೆಸುವುದನ್ನು ಕಲಿತು ನಂತರ ಮುಂದಿನ ವೈವಾಹಿಕ ಜೀವನದ ಬಗ್ಗೆ ಯೋಚಿಸಬೇಕು ಅಂದುಕೊಂಡಿದ್ದವಳಿಗೆ ಪದವಿ ಪರೀಕ್ಷೆ ಬರೆಯುವ ಸಮಯದಲ್ಲೇ ಮದುವೆ ನಿಶ್ಚಯ ಮಾಡಿದಿರಿ  ಮತ್ತು ಫಲಿತಾಂಶ ಬರುವ ಮುನ್ನವೇ ವಿವಾಹ ಮಾಡಿದಿರಿ... 

ಅದೂ ಅಜಗಜಾಂತರ ವಯಸ್ಸಿನ ವ್ಯತ್ಯಾಸದ ಹುಡುಗನನ್ನು ಆಯ್ಕೆ ಮಾಡಿದ್ದೂ ಅಲ್ಲದೆ ಇನ್ನೊಬ್ಬರ ಮುಂದೆ ಹುಡುಗನ ಕೆಲಸ, ಸಂಬಳ ನೋಡಿ ಮದುವೆ ಮಾಡುತಿಲ್ಲ ಹುಡುಗನಿಗೆ ಸ್ವಂತ ಮನೆ ಇದೆ, ಅನ್ನೋ ಒಂದೇ ಕಾರಣ ಹೇಳುತ್ತಿದ್ದೀರಿ.......... ಅಂತಹ  ತಪ್ಪು ನಾನೇನು ಮಾಡಿದೆ?

ಬೇರೆ ಹೆಣ್ಣು ಮಕ್ಕಳಂತೆ ಹಾದಿ ತಪ್ಪಿದ್ದೆನಾ? ಯಾವುದಾದರೂ ಪ್ರೇಮ ಪಾಶದಲ್ಲಿ ಮುಳುಗಿದ್ದೆನಾ? ಇಲ್ಲ ಅನಾಚಾರದ ಮೋಹಕ್ಕೆ ಒಳಗಾಗಿದ್ದೆನಾ? ಖಂಡಿತಾ ಇಲ್ಲ ಅಪ್ಪಾ ನಮ್ಮ ಸಂಸ್ಕೃತಿಯ ಅವಮಾನಿಸುವಂತಹ ಹಾಗೂ ನಿಮ್ಮ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ..... ಆದರೂ ನಿಮ್ಮ ದೃಷ್ಟಿಯಲ್ಲಿ ನಾ ಹೇಗೆ ಕಾಣುತ್ತಿರುವೆನೋ ನನಗೆ ಗೊತ್ತಿಲ್ಲ...

ಈಗ ಅನಿಸುತಿದೆ ಅಪ್ಪಾ ಎಲ್ಲರಂತೆ ನಾನೂ ಕೂಡಾ ಇರಬೇಕಿತ್ತು ಅಂತಾ... ನಾನು ಸಾಮಾನ್ಯ ಬದುಕನ್ನು ಪ್ರೀತಿಸಿದವಳು ಆಡಂಬರದ ಬದುಕನ್ನು ಎಂದೂ ಬಯಸಲಿಲ್ಲ....

ಇಂದಿನವರೆಗೂ ನನಗೆ ಅವಶ್ಯಕವಿರುವ ಎಲ್ಲಾ ವಸ್ತುಗಳ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೆ, ಯಾಕೆಂದರೆ ನನಗೆ ಆಯ್ಕೆ ಮಾಡಲು ಬಾರದು ನಾನೊಬ್ಬಳು ದಡ್ಡಿ ಎಂದು ಪ್ರತೀ ಬಾರಿ ನೀವೇ ಹೀಯ್ಯಾಳಿಸುತ್ತಿದ್ದಿರಿ  .....  ನೀವು ಆಯ್ಕೆ ಮಾಡಿದ ಯಾವುದನ್ನೂ ತಿರಸ್ಕರಿಸಿರಲಿಲ್ಲ..... ಕಾರಣ ನಿಮ್ಮ ಮೇಲಿನ ಗೌರವ ಮತ್ತು ಪ್ರೀತಿ  ಹಾಗೆಯೇ ಈ ಮದುವೆಯನ್ನು ಕೂಡಾ ನಾನು ತಿರಸ್ಕರಿಸುತ್ತಿಲ್ಲ.... ನೂರಕ್ಕೆ ನೂರಾ ಒಂದರಷ್ಟು ಇಷ್ಟವಿಲ್ಲದಿದ್ದರೂ .....  

ಹೊರ ಜಗತ್ತಿನ ಅರಿವೇ ಇಲ್ಲದ ನನ್ನನ್ನು ಗುರುತು ಪರಿಚಯ ಇಲ್ಲದ ದೂರದ ಊರಿಗೆ ಕೊಟ್ಟು ಮದುವೆ ಮಾಡಿ ನಿಮ್ಮ ಜವಾಬ್ದಾರಿ ಕಳೆದು ಕೈ ತೊಳೆದುಕೊಳ್ಳಬೇಕು ಎಂಬುದಷ್ಟೇ ನಿಮ್ಮ ಜೀವನದ ಗುರಿ ಅಂತ ನೀವು ಬಿಡಿಸಿ ಹೇಳಿದಾಗಲೇ ನಿಮ್ಮ ನಿಜವಾದ ಭಾವನೆಗಳು ಅರ್ಥವಾದಾದದ್ದು.......

ಇರಲಿ ಬಿಡಿ ಎಲ್ಲಾ ನನ್ನ ಹಣೆಯ ಬರಹ....... ದೈವ ಚಿತ್ತ..... ಅವನ ನಿಯಮ ಮೀರಿ ಇಲ್ಲಿ ಹುಲ್ಲುಕಡ್ಡಿಯೂ ಅಲುಗದು ಅವ ನಡೆಸಿದಂತೆ ನಡೆವೆ.......

ಅಪ್ಪಾ ನೀವು ಮಾಡಿದ ತಪ್ಪಿಗಾಗಿ ಕೊರಗುತ್ತಾ ಕೂರುವುದಿಲ್ಲ  ನಿಮ್ಮ ಮೇಲಿನ ಕೋಪಕ್ಕೆ ನನ್ನನ್ನು ಮದುವೆಯಾದ ಹುಡುಗನ ಕನಸುಗಳನ್ನು ನಾ ಹಾಳು ಮಾಡಲು ಇಷ್ಟ ಪಡುವುದಿಲ್ಲ ತುಂಬಾ ಪ್ರೀತಿ ಮಮಕಾರಗಳಿಂದ  ಬದುಕನ್ನು ಮುನ್ನಡೆಸುತ್ತೇನೆ...........

ಕೊನೆಗೆ ಒಂದು ಮಾತು :-  ಅಪ್ಪಾ ಇನ್ನು ಮುಂದೆ ನಾ ನಿಮ್ಮ ಪಾಲಿಗೆ ಬದುಕಿದ್ದೂ ಸತ್ತಂತೆ......... 

Sunday 1 June 2014

ಕಾಲ ಚಕ್ರದ ಜಾಲದಲ್ಲಿ.....

ನಾನು ನನ್ನ ಶತ್ರುವನ್ನೂ ನೋಯಿಸಲು ಇಷ್ಟಪಡುವುದಿಲ್ಲ ಎಂದವನೊಬ್ಬ ಹಿಂದೊಮ್ಮೆ ಬದುಕಿಗೆ ಬೆಳಕಾದ ಸ್ನೇಹಿತನನ್ನೇ  ವ್ಯಂಗ್ಯ ಮಾತಿನ ಮೂಲಕ ಚುಚ್ಚಿ ಹಿಂಸಿಸತೊಡಗಿದ....... ಇದೇ ಇರಬೇಕು ಕಾಲಚಕ್ರದ ಮಹಿಮೆ.......

ಕಷ್ಟದಲ್ಲಿ ಕಣ್ಣೀರಿಡುತ್ತಿದ್ದಾಗ ಕಣ್ಣೀರ ಒರೆಸಿ..... ನಿನ್ನ ಭಾರಗಳಿಗೆ ಹೆಗಲು ನೀಡಿ ಪಾಲು ಪಡೆದು ನೋವ ನಿವಾರಿಸಿದ... ನಿನ್ನ ಬದುಕಿಗೆ ನೆರಳಾಗಿ ನಿಂತದ್ದಕ್ಕೆ ನೀ ಕೊಟ್ಟ ಉಡುಗೊರೆ ಕಣ್ಣೀರು.... ಯಾರದೋ ತಪ್ಪು ಶಿಕ್ಷೆ ಮಾತ್ರ ನಿರಪರಾಧಿಗೆ.....

ನನಗೆ ಗೊತ್ತು ಸರಿ ತಪ್ಪುಗಳನ್ನು ಪರಾಮರ್ಶಿಸುವ ಮನಸ್ಥಿತಿ ನಿನ್ನಲ್ಲಿ ಇಲ್ಲ ಎಂದು..... ನಾನು ಮಾಡಿದ್ದೇ ಸರಿ ಎಂದು ವಾದಿಸುವ ಅಹಂ ಕೂಡಾ ಹೆಚ್ಚಾಗಿದೆ ಎಂಬುದು, ನಿನ್ನಲ್ಲಿನ ಮಾನವೀಯತೆಯ ಗುಣಗಳು ಬರೀ ತೋರ್ಪಡಿಕೆ ಮಾತ್ರ ಸೀಮಿತವೆಂಬುದು ಈಗ ನನಗೆ ಮನದಟ್ಟಾಗಿದೆ....
ಒಂದು ಮಾತು ನೆನಪಿಟ್ಟುಕೋ ಗೆಳಯ ಬಣ್ಣದ ಮಾತುಗಳಿಗೆ ಮನ್ನಣೆ ಎಂಬುದು ನಿನ್ನ ಪಾಲಿಗೆ ಸಿಹಿ ಆಗಿರಬಹುದು ಆದರೆ ಮುಂದೊಮ್ಮೆ ನಿನಗೇ ಅರ್ಥವಾಗುತ್ತದೆ ಗಾಜಿನ ರಾಮನೆಯಲ್ಲಿ ಕುಳಿತು ಎದುರು ಮನೆಯ ಕಿಟಕಿಗೆ ಕಲ್ಲು ಬೀಸುವ ಮುನ್ನ ಯೋಚಿಸು......
ಅಂತಿಮವಾಗಿ ಒಂದು ಮಾತು... ನಿನ್ನ ಸ್ವಾರ್ಥಕ್ಕಾಗಿ ನೀ ಯಾವ ಕ್ಷಣದಲ್ಲಾದರೂ ಬದಲಾಗಿಬಿಡುವೆ ಎಂಬ ಸತ್ಯವನ್ನು ಮನದಟ್ಟು ಮಾಡಿದ್ದಕ್ಕೆ ಧನ್ಯವಾದಗಳು...... 

Saturday 1 March 2014

ಜನುಮ ದಿನದ ಹಾರ್ದಿಕ ಶುಭಾಶಯಗಳು ಶ್ರೀಕಾಂತಣ್ಣ..........

ಒಂದು ದಿನ ದೇವಲೋಕದ ದೇವಾನು ದೇವತೆಗಳೆಲ್ಲಾ ಸಭೆ ಸೇರಿದ್ದರು...... ಚರ್ಚೆ ನಡೆಯುತ್ತಿತ್ತು..... ಚರ್ಚೆಯ ವಿವರ ಹೀಗಿತ್ತು...

ನಾವು ದೇವರುಗಳು ಅಂದರೆ ಭೂಲೋಕವನ್ನು ಸೃಷ್ಟಿಸಿದ್ದು ನಾವು, ಭೂಮಿಯನ್ನು ಬುಗುರಿಯಂತೆ ತಿರುಗಿಸುತ್ತಿರುವವರು..... 

ಭೂಮಿಯಲ್ಲಿನ ಪ್ರತಿಯೊಬ್ಬರ ಆಗು ಹೋಗುಗಳನ್ನು ಕಷ್ಟ ಸುಖಗಳನ್ನು, ನಗು ಅಳುಗಳನ್ನು ನಾವಿಲ್ಲಿ ಕಣ್ಣು ಹಾಯಿಸಿಯೇ ತಿಳಿದು ಕೊಳ್ಳುವಂತಹ ದಿವ್ಯ ಶಕ್ತಿ ಉಳ್ಳವರು.... ಅವುಗಳನ್ನು ಮೊದಲೆ ಗ್ರಹಿಸುವವರೂ ಕೂಡಾ ನಾವೇ ! ಎಲ್ಲಕ್ಕಿಂತ ಮಿಗಿಲಾಗಿ ಅದನ್ನು ನಿರ್ಧರಿಸುವವರೂ ನಾವೇ....! ನಾವೇ ಸರ್ವಶಕ್ತರು.... 

ಅಷ್ಟರಲ್ಲಿ ಲೋಕ ಸಂಚಾರಿ ನಾರದರು ಬಂದರು ಇವರ ಚರ್ಚೆಯ ಮಧ್ಯೆ ಮೂಗು ತೂರಿಸಿ ನಿಮ್ಮಂತೆಯೇ ಭೂಲೋಕದಲ್ಲೂ ಒಬ್ಬರು ನಮ್ಮ ದೇವಲೋಕದ ಆಗು ಹೋಗುಗಳ ಬಗ್ಗೆ ತಿಳಿದಿಕೊಂಡಿರುವವರು ಇದ್ದಾರೆ ಎಂದರು!

ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು

ಅದಾರು ಅವನಾರು ನಾವಿಲ್ಲಿ ನಡೆಸುವ ಮಾತು ಕಥೆಗಳನ್ನು, ಚರ್ಚೆ, ಏಕಾಂತ ಸಂಭಾಷಣೆಗಳನ್ನು ಕುಳಿತಲ್ಲೇ ಕಲ್ಪನೆ ಮಾಡಿ ಬರೆವವವರು?

ನಾರದರು ಮುಂದುವರೆಸಿದರು ಬರೆಯುವುದು ಅಷ್ಟೆ ಅಲ್ಲಾ, ಕೆಲವು ದೇವರುಗಳಿಗೆ ಭೂಲೋಕದ ವಿದ್ಯಾರ್ಥಿ ಭವನದ ಮಸಾಲೆ ದೋಸೆಯ ರುಚಿಯನ್ನೂ ಹತ್ತಿಸಿ ಬಿಟ್ಟಿದ್ದಾರೆ........ ದೇವಾನು ದೇವತೆಗಳೆಲ್ಲಾ ಮುಖ ಮುಖ ನೋಡಿಕೊಂಡರು!

ಹೌದು ಅಂತಹ ಒಬ್ಬರು ವ್ಯಕ್ತಿ ಇದ್ದಾರೆ ನಿಮಗೆ ಅವರನ್ನು ನೋಡುವ ಕುತೂಹಲವೇ? ಇಲ್ಲಿ ಬನ್ನಿ ಎಲ್ಲರೂ ಸುತ್ತಲೂ ನಿಲ್ಲಿ ಆಗೋ ಅಲ್ಲಿ ನೋಡಿ ಭೂ ಭಾಗದಲ್ಲಿ ಭಾರತ, ಅದರೊಳಗೆ ಕರುನಾಡು, ಅದರೊಳು ಬೆಂದಕಾಳೂರು,  ಬೆಂದಕಾಳೂರಿನ ಹೃದಯ ಭಾಗದಲ್ಲಿ ಕೈಯಲ್ಲಿ ಒಂದು ಕ್ಯಾಮರ ಹಿಡಿದು ಹಸನ್ಮುಖಿಯಾಗಿ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದರಲ್ಲಾ ಅವರೇ!!

ಎಲ್ಲಾ ದೇವತೆಗಳೂ ಒಕ್ಕೂರಲಿನಿಂದ ಇವರು ನಮ್ಮ ಶ್ರೀಕಾಂತು (Srikanth Manjunath) ಎಂದು ಉದ್ಘರಿಸಿದರು!

ನಾರದರು ಮುಂದುವರೆದು ಹೌದು ಇವರು ನಿಮ್ಮ ಪ್ರೀತಿಯ ಶ್ರೀಕಾಂತೂ ನಿಜ, ಜೊತೆಗೆ ಸರಸ್ವತಿಯ ಪ್ರೀತಿಯ ದತ್ತುಪುತ್ರ ಹಾಗಾಗಿ ಅಭಿಮಾನದಿಂದ ಕೆಲವು ದೇವತೆಗಳು ಆಗಾಗ ಅವರ ಬ್ಲಾಗಿನ ಒಳಗೆ ಹೋಗಿ ಪಾತ್ರವಾಗಿ ಇರುತ್ತಾರೆ ಎಂದರು

ಇಂದು ಅವರ ಜನುಮ ದಿನ ಹೇಗೂ ಎಲ್ಲಾ ದೇವತೆಗಳೂ ಸೇರಿದ್ದೀರಿ ಹರಸಿ ಹಾರೈಸಿ ಎಂದಾಗ ಎಲ್ಲಾ ದೇವತೆಗಳೂ "ಶತಮಾನಂ ಭವತಿ ಶತಾಯುಹ್"   ಎಂದು ಹಾರೈಸಿದರು ಎಂಬಲ್ಲಿಗೆ ಈ ಬರಹಕ್ಕೆ ಮಂಗಳ ಹಾಡಲಾಯಿತು.

>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>

ಜನುಮ ದಿನದ ಹಾರ್ದಿಕ ಶುಭಾಶಯಗಳು ಶ್ರೀಕಾಂತಣ್ಣ

Wednesday 5 February 2014

ವಿಧಿಯೇ ನಿನಗೆ ಧಿಕ್ಕಾರ …

ಅದೊಂದು ಪುಟ್ಟ ಕುಟುಂಬ ಗಂಡ ಹೆಂಡತಿ ಇಬ್ಬರು ಮಕ್ಕಳು.... ಅಪ್ಪ ಒಂದು ಹೋಟೆಲ್ ನ ಕೆಲಸಗಾರರಾಗಿದ್ದರು, ಅಮ್ಮ ಗೃಹಿಣಿ…ಮಕ್ಕಳಲ್ಲಿ ಮಗ ದೊಡ್ಡವನು ಎರಡನೇ ತರಗತಿ, ಮಗಳು ಯೂ ಕೆ ಜಿ........

ಕಷ್ಟ ಎಷ್ಟೇ ಇದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ಹಗಲು ರಾತ್ರಿ ದುಡಿಯುತ್ತಿದ್ದ ಅಪ್ಪ,  ದಿನವೂ ಮಕ್ಕಳಿಗೆ ಅಕ್ಷರಗಳನ್ನು ತಿದ್ದಿ ಹೇಳಿಕೊಡುತ್ತಿದ್ದ ಅಮ್ಮ....... ಹೀಗೆ ಚಿಕ್ಕ ಸಂಸಾರ ಸುಖೀ ಸಂಸಾರ ಸುಗಮವಾಗಿ ಸಾಗುತ್ತಿತ್ತು......

ಇಂತಹ ಕುಟುಂಬಕ್ಕೆ 2014ರ ಹೊಸ ವರ್ಷ ಸಂಭ್ರಮ ತರುತ್ತದೆ  ಎಂದೇ ಭಾವಿಸಿ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಹಬ್ಬಕೆ ಎಳ್ಳು ಬೆಲ್ಲವ ಬೀರಿ ನೆರೆ ಹೊರೆಯವರಿಗೆ ಹಂಚಿ ಸಂಭ್ರಮಿಸಿದ್ದರು, ಮರು ದಿನ ಬಂಧು ಬಳಗದವರಿಗೆ ಹಂಚಲು ಎಲ್ಲವ ಸಿದ್ಧತೆ ಮಾಡಿಕೊಂಡಿದ್ದರು. 

ಮಕ್ಕಳಿಬ್ಬರನ್ನು  ಶಾಲೆಗೆ ಬಿಟ್ಟು ಅಲ್ಲಿಂದಲೇ ತಮ್ಮ ಸಹೋದರ ಸಂಬಂಧಿ ಊರಿಗೆ ಹೊರಟರುತನ್ನೂರಿನಿಂದ 30-35 ಕಿಲೋ ಮೀಟರ್ ದೂರದ ಒಂದು ಗ್ರಾಮಕ್ಕೆ ಹೋಗಿ ಸಭ್ರಮದಿಂದಲೇ ಎಳ್ಳು ಬೆಲ್ಲ ಕೊಟ್ಟು ಸಂಕ್ರಾಂತಿಯ ಶುಭ ಕೋರಿ ಎಲ್ಲರೊಡನೆ ಕಾಲ ಕಳೆದು ಊಟ ಮುಗಿಸಿ  ಮರಳಿ ಹೊರಟರು …….

ಹೊರಟ ಹತ್ತು ಹದಿನೈದು ನಿಮಿಷದಲ್ಲೇ ಬರಸಿಡಿಲಿನಂತೆ  ಬಂದು ಡಿಕ್ಕಿ ಹೊಡೆದಿತ್ತು ಯಮ ಸ್ವರೂಪಿ ಲಾರಿ ……….   ಅಪಘಾತದ ರಭಸಕ್ಕೆ ಪತಿ ಸ್ಥಳದಲ್ಲೇ ಮೃತ ಪಟ್ಟಿದ್ದರು …..  :(  ಆಂಬ್ಯುಲೆನ್ಸ್ ಸಹಾಯ ದಿಂದ  ಪತ್ನಿಯನ್ನು  ಆಸ್ಪತ್ರೆಗೆ ದಾಖಲಿಸಲಾಯಿತು  ಸ್ಥಿತಿ ಚಿಂತಾಜನಕವಾಗಿತ್ತು ………… L

ಮರುದಿನ ಪತ್ನಿಗೆ ಪ್ರಜ್ಞೆ ಬಂದಿತ್ತು ಆದರೆ ಆಘಾತವಾಗಬಹುದು ಎಂಬ ಕಾರಣದಿಂದ ಪತಿಯ ಮರಣದ ಸುದ್ದಿ ಹೇಳದೆ ಅಂತ್ಯಕ್ರಿಯೆ ನಡೆಸಲಾಯಿತು ……. ಆಕೆಯ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದಿತ್ತು  ಆದರೆ ಸುಧಾರಣೆಯಾಗುವುದೆಂಬ ಭರವಸೆ ಸಿಕ್ಕಿತ್ತು …….. ಆದರೆ ಮೂರು ದಿನಗಳ ನಂತರ  ಇಬ್ಬರೂ ಮಕ್ಕಳನ್ನು ಅನಾಥರಾಗಿಸಿ ಅವರೂ ಇಹ ಲೋಕ ತ್ಯಜಿಸಿದರು ……….

ಈಗ ಆ ಇಬ್ಬರು ಮಕ್ಕಳ ಸ್ಥಿತಿ ನೆನೆದು ಮನಸು ಭಾರವಾಗಿದೆ, ಇಬ್ಬರೂ ನಾನು ಕೆಲಸ ಮಾಡುತ್ತಿರುವ ಶಾಲೆಯ ವಿದ್ಯಾರ್ಥಿಗಳೇ ……. ಇನ್ನೂ ಪುಟಾಣಿ ಕಂದಮ್ಮಗಳು

ಓ ವಿಧಿಯೇ ನಿನಗೆ ಕರುಣೆಯೇ ಇಲ್ಲವ ? ಲೋಕ ಜ್ಞಾನವೇ ಅರಿಯದ ಮಕ್ಕಳನ್ನು ಹೆತ್ತವರಿಂದ ದೂರ ಮಾಡಿ ವಿಕಟ ಸಂತಸ ಪಡುವ ನಿನ್ನ ಬುದ್ಧಿಗೆ ಧಿಕ್ಕಾರವಿರಲಿ ……….. 

Monday 13 January 2014

ಅಸ್ಪಷ್ಟ.... ಅದೂ ಅರ್ಧಂಬರ್ಧ



ಬಡಕಲು ದೇಹದ ಬಡವ ನಾನು
ನನ್ನ ಗುಡಿಸಲೇ ನನ್ನರಮನೆಯು
ಸಗಣಿ ಸಾರಿಸಿದ ನೆಲವೇ ನನ್ನ
ರತ್ನಗಂಬಳಿಯ ಹಾಸುದಾರಿಯೂ
ಹರಕು ಚಾಪೆಯೇ ನನ್ನ ಹಾಸಿಗೆಯು 
ಮುರುಕು ಕಿಟಕಿಯೇ ಗಾಳಿಯಂತ್ರವು
ಬುಡ್ಡಿ ದೀಪದ ಬೆಳಕೇ ಸ್ವರ್ಗದ ಸಿರಿಯು
ಹೊದ್ದುಕೊಳ್ಳುವ ಹೊದಿಕೆಗೆ ಗತಿ ಇಲ್ಲದಿದ್ದರೂ
ಕಣ್ಣೊಳಗೆ ಕಾಡುವ ಕನಸುಗಳಿಗೇನು ಕೊರತೆಯಿಲ್ಲ 
ಮನದೊಳಗೆ ಮೂಡುವ ಭಾವನೆಗಳಿಗೇನು ಕಡಿಮೆ ಇಲ್ಲ...........

Friday 10 January 2014

ಬಡವಿಯೊಡಲುರಿ ...........


ನನ್ನ ಅಚ್ಚು ಮೆಚ್ಚಿನ ಲೇಖಕರಲ್ಲಿ ಒಬ್ಬರಾದ ಹಾ ಮಾ ನಾಯಕ್ ಅವರ ಸಂಗತಿ ಎನ್ನುವ ಪ್ರಬಂಧ ಸಂಕಲನದಲ್ಲಿ  ‘ಮಹಾಕಾವ್ಯ ಜೀವನಎನ್ನುವ ಒಂದು ಸಂಗತಿಯು ನನ್ನನ್ನು ಬಹಳವಾಗಿ ಕಾಡಿತು….. ಇದರಲ್ಲಿ ಉತ್ತರ ಕರ್ನಾಟಕದ ಬಡ ಜನರ ಬವಣೆಯ ಬದುಕಿನ ಇನ್ನೊಂದು ಚಿತ್ರಣ ಅನಾವರಣಗೊಳ್ಳುತ್ತದೆ……. ಅದನ್ನು ಓದಿದ ಮೇಲೆ ಕಣ್ಣಂಚಲ್ಲಿ ಒಂದು ಹನಿ ಕಣ್ಣೀರ ಜಿನುಗಿದಂತೆ ಭಾವ…….
ಈ ಒಂದು ಪ್ರಬಂಧ ಹತ್ತಾರು ಜನರನ್ನು ತಲುಪಲಿ ಎನ್ನುವ ಆಶಯದಿಂದ ಇಲ್ಲಿ ಪ್ರಕಟಿಸುತ್ತಿದ್ದೇನೆಇದರ ಮೂಲಕ ಲೇಖಕರಿಗೆ ಮತ್ತು  ಪ್ರಕಾಶಕರಿಗೆ ಪ್ರೀತಿಯಿಂದ ಧನ್ಯವಾದ ತಿಳಿಸುತ್ತೇನೆ…… 

ಅವರ ಪ್ರಬಂಧ ನೋಡಿ ಕಲ್ಪನೆ ಮಾಡಿ ಬರೆದ  ಕವನ ಇದು....

ಬಡವಿಯೊಡಲುರಿ ...........

ಬೆಳಗಾಗೆದ್ದು ಉಟ್ಟುಡುಗೆಯಲೇ
ಬೆಟ್ಟ ಗುಡ್ಡಗಳ ಕಡೆಗೆ ನಡೆದು
ದೂರದ ಬಯಲು ದಾರಿಯಲಿ ಸಾಗಿ
ಹತ್ತು ಹಲವೆಡೆ ಸುತ್ತಿ ಅಲೆದು

ಸಿಕ್ಕ ಉರುವಲುಗಳ ಒಟ್ಟುಗೂಡಿಸಿ
ಇದ್ದ ದಾರವ ಹಗ್ಗವಾಗಿಸಿ ಬಿಗಿದು
ಕಟ್ಟನದನು ಶಿರದ ಮೇಲಕೇರಿಸಿ
ಮನದ ಭಾರದ ಮುಂದೆ ಹೆಗಲ
ಭಾರವ ಮರೆತು ನಡೆಯುತ ಸಾಗುತಿರಲು

ಬೀಸಿತೊಂದು ಗಾಳಿ, ಮಿಂಚಿತೊಂದು ಮಿಂಚು,
ಬಡಿಯಿತೊಂದು ಸಿಡಿಲು, ಭೋರ್ಗರೆಯಿತು ಮಳೆ
ವರ್ಷಧಾರೆಯ ನಡುವೆ ಸಿಲುಕಿ ನಡುಗಿ ನಡೆಯುತಾ
ಗಮ್ಯ ತಲುಪುವ ಹೊತ್ತಿಗೆ ಕತ್ತಲಾಯಿತು

ಹೊತ್ತು ತಂದ ಹೊರೆಯ ಇಳಿಸಿ ಕಟ್ಟಿದ್ದ ದಾರವ
ಬಿಚ್ಚಿ ನೋಡಲು ಕಟ್ಟಿಗೆಯೆಲ್ಲವು ನೆನೆದು
ಹಸಿಯಾಗಿಹುದ ಕಂಡೊಡನೆ ತೊಯ್ದ ಮಳೆ
ಹನಿಯ ಜೊತೆಗೂಡಿತು ಕಣ್ಣಂಚಿನ ಕಣ್ಣೀರು

ಬವಣೆ ಪಟ್ಟು ಒಟ್ಟುಗೂಡಿಸಿ ಕಟ್ಟಿ ತಂದ
ಕಟ್ಟಿಗೆಯಲಿ ಹೊತ್ತಿನ ಕೂಳಿನ ತುತ್ತನು
ಅಟ್ಟು ಉಣ್ಣಲಾಗದಂತೆ ಮಾಡಿದ ಕಟುಕ
ವಿಧಿಯ ಕುಹಕ ಬುದ್ಧಿಗೆ ಹಿಡಿ ಶಾಪವಿರಲಿ ......

Thursday 9 January 2014

ಕಾಶ್ಮೀರ... ! ತಣ್ಣಗೆ ಕಾಣು(ಡು)ವ ಜ್ವಾಲಾಮುಖಿ!!



ಅವರವರ
ಭಾವಕ್ಕೆ ತಕ್ಕಂತೆ…….. ದೂರದ ಬೆಟ್ಟ ನುಣ್ಣಗೆ !
ಪ್ರೇಮಿಗಳಿಬ್ಬರ ನಡುವಿನ ಮಾತು ಕಥೆ :- ಓ  ಕಾಶ್ಮೀರ ನೀನೆಷ್ಟು ಸುಂದರ! ಅದ್ಭುತ ರಮಣೀಯ…. ನೀ ನಿಸರ್ಗದ ಸ್ವರ್ಗ, ನಿನ್ನ ಮಡಿಲಲ್ಲಿ ನಾವಿಬ್ಬರು ಬಾಹುಬಂಧನದಲ್ಲಿ ಒಂದಾಗಿರುವಾಗ ನಿನಗಿಂತ ಬೇರೆ ಸ್ವರ್ಗ ಇನ್ನೊಂದಿಲ್ಲ, ನಮ್ಮಂತಹ ಸಹಸ್ರ ಸಹಸ್ರ ಪ್ರೇಮಿಗಳಿಗೆ ನೀನು ಸುಖ ನಿದ್ರೆಯ ನೀಡಿರುವೆ ಆ ತೃಪ್ತಿ ಅವಿಸ್ಮರಣೀಯ!  ನಿನ್ನ ಪ್ರೀತಿಗೆ ನಾವು ಚಿರ ಋಣಿ ಜೈ ಹಿಂದ್ ಜೈ ಭಾರತ ಮುಕುಟವೇ….

ಅತ್ತ ಯೋಧರಿಬ್ಬರ ಮಾತುಕತೆ :-  ಓಹ್ ಕಾಶ್ಮೀರಾ ನೀನೆಷ್ಟು ಘೋರ? ರೌದ್ರ ರಮಣೀಯನೀ ನಿಸರ್ಗದ ನರಕ , ನಿನ್ನ ಗಡಿಯಲ್ಲಿ ನಾವು ನಿಂತಿರುವಾಗ ನರಕದ ಇನ್ನೊಂದು ಮುಖದ ದರ್ಶನ ನಮಗಾದಂತೆ. ನಮಗೆ ನಿನಗಿಂತ ನರಕ ಸದೃಶ ಜಗತ್ತು ಇನ್ನೊಂದಿಲ್ಲ ಎಂದೆನಿಸುತ್ತಿದೆ, ನಿನ್ನ ಉಳಿವಿಗಾಗಿ ಸಹಸ್ರ ಸಹಸ್ರ ಜನರು ನಿನ್ನ ಮಡಿಲಲ್ಲಿ ಚಿರ ನಿದ್ರೆಗೆ ಜಾರಿಹರು  ನಿನ್ನ ಪಾದಕೆ ನಮ್ಮ ಪ್ರಾಣ ಪಣವಾಗಿದೆ ಜೈ ಹಿಂದ್ ಜೈ ಭಾರತ ಮುಕುಟವೇ

ಈ ಕಾಲ್ಪನಿಕ ಮಾತು ಕಥೆಗಳ ಹಿಂದಿರುವ ಕಾಶ್ಮೀರದ  'ಎರಡು ಮುಖದ ಭಾವಗಳನ್ನುಅಂತರಂಗಕ್ಕೆ ತೋಚಿದ ಹಾಗೆ ಅಕ್ಷರ ಪದಪುಂಜಗಳಲ್ಲಿ ಹಿಡಿದಿಡುವ ಒಂದು ಪ್ರಯತ್ನ ಈ ಅಂತರಂಗದಿಂದ”……

>>>>>>>>>>>>>>>>>>>>>>>>>>>>>>>>>>>>>>>>>>>>>>>
ಸುಂದರ ಭಾವ ಕಾಶ್ಮೀರ......
ದೂರದಿಂದ ನೋಡುವವರಿಗೆ ಇದು ಮಂಜಿನಿಂದ ಸ್ವರ್ಗ ಧರೆಗಿಳಿದಂತೆ ಕಾಣುವ ಲೋಕದ ಜಾಗ….. ಪ್ರೇಮಿಗಳ ಪಾಲಿನ ಪ್ರೇಮಲೋಕ………. ನವ ವಧು ವರರ ಪಾಲಿಗೆ ಸ್ವರ್ಗಲೋಕ……….  

ನಲ್ಲ ನಲ್ಲೆಯರು ಜೊತೆ ಜೊತೆಗೆ ನಡೆವ, ಬಿಸಿಯಪ್ಪುಗೆಗೆ ಹಾತೊರೆಯುವ ಸ್ಥಳ….. ರಕ್ತದ ಕಣ ಕಣದಲ್ಲೂ ಬಿಸಿಯೇರಿಸುವ ಜಾಗ ಬಿಸಿಯುಸಿರ ಮಿಲನಕ್ಕೆ ರೋಮಾಂಚಿತವಾಗುವ ಸ್ಥಳ….. ಮೋಡಗಳ ಮುಟ್ಟುವಷ್ಟು ಎತ್ತರಕ್ಕೆ ಏರಿ ಜಗತ್ತನ್ನೇ ಗೆದ್ದೇ ಬಿಟ್ಟಷ್ಟು ಸಂತಸ ಪಡುವ ಪ್ರದೇಶ……….

ಜೀವಕ್ಕೆ ಜೀವವೆನಿಸುವ ಪ್ರೇಮಿಗಳಿಗೆ ಸ್ವರ್ಗ ಸೌಂದರ್ಯ ಸೋಪಾನ……….  ಬಿರಿದ ಮೊಗ್ಗಿನ ಮೇಲೆ, ಅರಳಿದ ಹೂಗಳ ಮೇಲೆ ಮಂಜಿನ ಬಿಂದುಗಳ ಕಂಡಾಗ ಹೃದಯಾಂತರಾಳದಿ ನದಿ ಹರಿದಷ್ಟು ರೋಮಾಂಚನ....

ಕಣ್ಣು ಹಾಯಿಸಿದಷ್ಟೂ ಎತ್ತರಕೆ ಕಾಣುವ ಆಗಸವ ನೋಡಿ ಗಂಟಲು ಹರಿಯುವಷ್ಟು ಕಿರುಚಿ ಖುಷಿ  ಪಡುವ ಸಮಯ ಆನಂದಮಯ…….

ದೂರದಲ್ಲಿರುವ  ಬಂಧು ಬಾಂಧವರು/ ಸ್ನೇಹಿತರು ಇಲ್ಲಿಗೆ ಹೋದವರನು ನೆನೆದು ಸಂತಸ ಪಡುವ ಕಾರಣವಾಗುವ ಸ್ಥಳ,

ಬಾಳ ಪಯಣದ ಸಂಗಾತಿಯ ಜೊತೆಗೂಡಿ ಹೆಜ್ಜೆ ಇಡುವಾಗ  ಇನ್ನಾವ ಗೊಡವೆಯ ಚಿಂತೆ ನಮಗೇಕೆ ಎನ್ನುವ ಭಾವ
ಇಲ್ಲಿರುವ ಪ್ರತೀ ಗಂಟೆಯೂ  ಒಂದೊಂದು ಕ್ಷದಂತೆ ಕಳೆದ ಭಾವ, ನಿಲ್ಲು ಕಾಲವೇ ನಿಲ್ಲು ನನ್ನ ನಲ್ಲೆ  ಜೊತೆಗಿರುವಾಗ ಓಡಬೇಡ ತೆವಳುತ್ತಾ ಸಾಗು ಎನ್ನುವಂತೆ ಕೇಳಿಕೊಳ್ಳುವ ಮಧುರ ಚಿಂತನೆ…….

ಪ್ರೀತಿ ಧ್ಯೋತಕದ ಪ್ರತೀಕವಾದ ಪ್ರಕೃತಿಯ ಮಡಿಲಲ್ಲಿ ಜಗದ ಎಲ್ಲ ಭಾವಗಳನ್ನು ಮರೆತು ತಂಪು ತಂಪಾಗಿ ಹರಿವ ಝರಿಯಲಿ ಬೀಳುವ ನೀರನು ಕಂಡಾಗಾ ರೋಮಾಂಚನ
>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>>
ಯಾತನಾ ಭಾವ ಕಾಶ್ಮೀರ......
ಆದರೆ ಹತ್ತಿರದಿಂದ ನೋಡಿದಾಗ ಮಾತ್ರ ತಿಳಿಯುವುದು ಅದು ತಣ್ಣಗೆ ಕಾಣುವ ಜ್ವಾಲಾಮುಖಿ ಎಂದು…… ಮದ್ದು ಗುಂಡು ಬಂದೂಕು, ಸ್ಪೋಟಕಗಳಿಂದ ಹನಿಗಳಿಂದ ಕೂಡಿದ ನರಕ ಲೋಕ ಎಂದು ….. ಬಾಳ  ಪಯಣದ ಜೊತೆಗಾರನ   ಸಂಗಾತಿಯಿಂದ ದೂರ ಮಾಡುವ ಸ್ಥಳ……. 

ದೂರದಲ್ಲಿರುವ  ಬಂಧು ಬಾಂಧವರು/ ಸ್ನೇಹಿತರು  ಇಲ್ಲಿಹರನು ನೆನೆದು ನಿಟ್ಟುಸಿರ ಬಿಡುವಿಕೆಗೆ ಕಾರಣವಾಗುವ ಸ್ಥಳ……   ರಕ್ತದ ಕಣ ಕಣವನ್ನೂ ಹೆಪ್ಪುಗಟ್ಟಿಸುವ ಜಾಗ…….  ನಮ್ಮ ದೇಶದ ಇಂಚಿಂಚನ್ನೂ ಬಿಟ್ಟುಕೊಡಲಾಗದೆ ಕಾದು ಕುಳಿತ ಪ್ರದೇಶ…….  

ಜೀವದ ಹಂಗನ್ನು ತೊರೆದು ಜೀವಕ್ಕಿಂತ ಹೆಚ್ಚಾದ ದೇಶ ರಕ್ಷಣೆಯೇ ಯೋಧರ ಜೀವನ…..  ಚಿಗುರಲ್ಲೇ ಉದುರಿಬಿದ್ದ ಮೊಗ್ಗಿನ ಮೇಲೆ,  ಬಂದೂಕಿನ ನಳಿಕೆಯ ಬಿಸಿಗೆ ಬಾಡಿದ ಹೂವುಗಳ ಮೇಲಿನ ರಕ್ತದ ಕಲೆ ಕಂಡಾಗ ಹೃದಯ ಹಿಂಡಿದ ಯಾತನೆ……. 

 ಮನದ ನೋವ ಯಾರಲ್ಲೂ ಹೇಳಲಾಗದೆ ಎತ್ತರದ ಗಸವ ನೋಡಿ ಶಬ್ಧವ ಹೊರಡಿಸಲಾಗದೆ ಮನದಲ್ಲೇ ಕೊರಗುವ ಸಮಯ ಯಾತನಾಮಯ……….

ಬಾಳ ಪಯಣದ ಹಾದಿಯಲಿ ಜೊತೆಗೂಡಿದ ಸಂಗಾತಿಯ ಬಿಟ್ಟು ಬಂದು ದೇಶ ಸೇವೆಯೇ ಮೇಲು ಎಂದು ಗಡಿ ಕಾದು ಕುಳಿತ ದೇಶದ ಗೊಡವೆಯು ನಮ್ಮದು ಎನ್ನುವ ಭಾವ.....
ಇಲ್ಲಿ  ಕಳೆ ಪ್ರತೀ ಗಂಟೆಯೂ ಒಂದೊಂದು ದಿನ ಕಳೆದಂತೆ ಕಳೆಯಲಾಗದ ಭಾವ ….. ಓಡು ಕಾಲವೇ ಓಡು ಬೇಗ ಕವಿಯಲಿ ಇರುಳು …. ಓಡು ಕಾಲವೇ ಓಡು ನನ್ನ ನಲ್ಲೆಯ ಸೇರುವ ಸಮಯದವರೆಗೆ ಎನ್ನುವ ಯಾತನೆ…..

ಇಲ್ಲಿ ಸಿಡಿದ ಮದ್ದುಗಳ ನಡುವೆ ಸಿಲುಕಿ ಸಿಡಿದ ದೇಹದಿಂದ ಸುರಿದ ನೆತ್ತರ ಕೋಡಿಯ ಹರಿವು ಬದುಕಿರುವ ನಮ್ಮ ನೆತ್ತರನ್ನೂ ಹೆಪ್ಪುಗಟ್ಟಿಸುವಂತಿದೆ

………………………………
..... <><><><><><>…………………………………

ಒಂದು ಭೂಮಿಯ ಗಡಿ
ಭಾಗದ ಉಳಿವಿಕೆಗಾಗಿ
ಎರಡು ದೇಶಗಳ
ನಡುವೆ
ನಡೆವ ಘೋರ ಯುದ್ಧದಿ
ಮಡಿದವರ ಸಂಖ್ಯೆ ಸಹಸ್ರ ಸಹಸ್ರ
…….

ಅದೇ ಗಡಿಯಲಿ

ಬೆಳೆದ ಹೂವ ನಲ್ಲೆಯ
ಮುಡಿಗೇರಿಸಿ ನಲಿದವರೂ
ಸಹ ಸಹಸ್ರ ಸಹಸ್ರ
….

ಕೊನೆಗೆ ಅನಿಸಿದ್ದು "ಕಾಶ್ಮೀರ ಪ್ರೇಮಿಗಳ ಪಾಲಿನದು ಮಾತ್ರ
ಆಗುವುದು ಸಾಧ್ಯವಿಲ್ಲವೇ?" 
ಈ ಹೋರಾಟಕ್ಕೆ ಕೊನೆಯಿಲ್ಲವೇ?????