ನಾ ನಿನ್ನಂತಾಗಬೇಕು

ನಾ ನಿನ್ನಂತಾಗಬೇಕು
ನನ್ನೊಳಗಿರುವ ಅಹಂ ಎಲ್ಲವ ಕಳಚಿ ನಿನ್ನಂತೆ ನಾನಾಗುವ ಕನಸು ನನ್ನದು.... ಮೌನದಿ ಮನವ ಮುನ್ನಡೆಸುವ ಭಾವವ ಅನುಗ್ರಹಿಸು......

Monday 25 August 2014

ಮೂಕ ಸಂವೇದನೆ.....

ನಾ ಕಂಡ ಮುಗ್ಧ ಮನಸಿನ ಗೆಳತಿಯ ಅಂತರಂಗದ ಮೂಕ ಸಂವೇದನೆಯ  ಗ್ರಹಿಕೆಯ ಅನಾವರಣ ಇಲ್ಲಿದೆ..... ತೋಚಿದಂತೆ ಗೀಚಿರುವೆ  ತಪ್ಪು ಒಪ್ಪುಗಳನ್ನು ತಿದ್ದಿ ಓದಿಕೊಳ್ಳಿ.... - ಸ. ಬಿ. ಕ

ಚಿತ್ರ : ಅಂತರ್ಜಾಲ ಕೃಪೆ 

ಅಪ್ಪಾ ನನ್ ಜೀವನದಲ್ಲಿ ಹುಟ್ಟಿನಿಂದ ಇಲ್ಲೀವರೆಗೊ ನೀವು  ಹಾಕಿದ ಒಂದು ಗೆರೆಯನ್ನೂ ದಾಟಿದವಳಲ್ಲ ನಾನು.......

ಇಷ್ಟು ದಿನ ನಿಮ್ಮ ಮೇಲಿದ್ದ ಅಭಿಮಾನದ ಆಶಾ ಗೋಪುರ ಕಳಚಿ ನಾ ನಿಂತ ಜಾಗದಲ್ಲೇ ಕುಸಿದು ಪಾತಾಳಕ್ಕೆ ಮುಳುಗಿದಂತೆ ಆಯಿತು...... ಇಪ್ಪತ್ತು ವರ್ಷಗಳಿಂದ ನಾನು ನನ್ನೊಳಗೆ ಬೆಳೆಸಿಕೊಂಡು ಬಂದಿದ್ದ ಭಾವನೆಗಳನ್ನು ಈ ಇಪ್ಪತ್ತು ದಿನಗಳಲ್ಲಿ ಅದರಲ್ಲೂ ಕೊನೆಯ ಈ ಇಪ್ಪತ್ತು ನಿಮಿಷಗಳಲ್ಲಿ ನುಚ್ಚು ನೂರು ಮಾಡಿಬಿಟ್ಟಿರಿ......

ನಿಜ ಅಪ್ಪಾ ನಾನು ಭಾವಿಯೊಳಗಿನ ಕಪ್ಪೆ, ನನಗೆ ಈ ಜಗತ್ತಿನ ಅರಿವಿಲ್ಲ ನಿಜ ಆದರೆ ಈ ಭಾವಿಯೊಳಗಿಂದ ಆಚೆ ಕಣ್ಣು ಹಾಯಿಸಲು ಸ್ವತಂತ್ರ ನೀಡದೇ ಇದ್ದವರೊ ನೀವೇ ನೆನಪಿರಲಿ..... ಇಂದು ನಿನಗೆ ಯಾವುದರಲ್ಲ್ಲೂ ಯೋಗ್ಯತೆ ಇಲ್ಲ ಎಂದು ಹೇಳುತ್ತಿರುವವರೂ ನೀವೇ...

ಉನ್ನತ ವಿದ್ಯಾಭ್ಯಾಸ ಮಾಡಿ ನನ್ನ ಕಾಲ ಮೇಲೆ ನಾನು ನಿಂತು ಬದುಕನ್ನು ಮುನ್ನಡೆಸುವುದನ್ನು ಕಲಿತು ನಂತರ ಮುಂದಿನ ವೈವಾಹಿಕ ಜೀವನದ ಬಗ್ಗೆ ಯೋಚಿಸಬೇಕು ಅಂದುಕೊಂಡಿದ್ದವಳಿಗೆ ಪದವಿ ಪರೀಕ್ಷೆ ಬರೆಯುವ ಸಮಯದಲ್ಲೇ ಮದುವೆ ನಿಶ್ಚಯ ಮಾಡಿದಿರಿ  ಮತ್ತು ಫಲಿತಾಂಶ ಬರುವ ಮುನ್ನವೇ ವಿವಾಹ ಮಾಡಿದಿರಿ... 

ಅದೂ ಅಜಗಜಾಂತರ ವಯಸ್ಸಿನ ವ್ಯತ್ಯಾಸದ ಹುಡುಗನನ್ನು ಆಯ್ಕೆ ಮಾಡಿದ್ದೂ ಅಲ್ಲದೆ ಇನ್ನೊಬ್ಬರ ಮುಂದೆ ಹುಡುಗನ ಕೆಲಸ, ಸಂಬಳ ನೋಡಿ ಮದುವೆ ಮಾಡುತಿಲ್ಲ ಹುಡುಗನಿಗೆ ಸ್ವಂತ ಮನೆ ಇದೆ, ಅನ್ನೋ ಒಂದೇ ಕಾರಣ ಹೇಳುತ್ತಿದ್ದೀರಿ.......... ಅಂತಹ  ತಪ್ಪು ನಾನೇನು ಮಾಡಿದೆ?

ಬೇರೆ ಹೆಣ್ಣು ಮಕ್ಕಳಂತೆ ಹಾದಿ ತಪ್ಪಿದ್ದೆನಾ? ಯಾವುದಾದರೂ ಪ್ರೇಮ ಪಾಶದಲ್ಲಿ ಮುಳುಗಿದ್ದೆನಾ? ಇಲ್ಲ ಅನಾಚಾರದ ಮೋಹಕ್ಕೆ ಒಳಗಾಗಿದ್ದೆನಾ? ಖಂಡಿತಾ ಇಲ್ಲ ಅಪ್ಪಾ ನಮ್ಮ ಸಂಸ್ಕೃತಿಯ ಅವಮಾನಿಸುವಂತಹ ಹಾಗೂ ನಿಮ್ಮ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ..... ಆದರೂ ನಿಮ್ಮ ದೃಷ್ಟಿಯಲ್ಲಿ ನಾ ಹೇಗೆ ಕಾಣುತ್ತಿರುವೆನೋ ನನಗೆ ಗೊತ್ತಿಲ್ಲ...

ಈಗ ಅನಿಸುತಿದೆ ಅಪ್ಪಾ ಎಲ್ಲರಂತೆ ನಾನೂ ಕೂಡಾ ಇರಬೇಕಿತ್ತು ಅಂತಾ... ನಾನು ಸಾಮಾನ್ಯ ಬದುಕನ್ನು ಪ್ರೀತಿಸಿದವಳು ಆಡಂಬರದ ಬದುಕನ್ನು ಎಂದೂ ಬಯಸಲಿಲ್ಲ....

ಇಂದಿನವರೆಗೂ ನನಗೆ ಅವಶ್ಯಕವಿರುವ ಎಲ್ಲಾ ವಸ್ತುಗಳ ಆಯ್ಕೆಯನ್ನು ನಿಮಗೆ ಬಿಟ್ಟಿದ್ದೆ, ಯಾಕೆಂದರೆ ನನಗೆ ಆಯ್ಕೆ ಮಾಡಲು ಬಾರದು ನಾನೊಬ್ಬಳು ದಡ್ಡಿ ಎಂದು ಪ್ರತೀ ಬಾರಿ ನೀವೇ ಹೀಯ್ಯಾಳಿಸುತ್ತಿದ್ದಿರಿ  .....  ನೀವು ಆಯ್ಕೆ ಮಾಡಿದ ಯಾವುದನ್ನೂ ತಿರಸ್ಕರಿಸಿರಲಿಲ್ಲ..... ಕಾರಣ ನಿಮ್ಮ ಮೇಲಿನ ಗೌರವ ಮತ್ತು ಪ್ರೀತಿ  ಹಾಗೆಯೇ ಈ ಮದುವೆಯನ್ನು ಕೂಡಾ ನಾನು ತಿರಸ್ಕರಿಸುತ್ತಿಲ್ಲ.... ನೂರಕ್ಕೆ ನೂರಾ ಒಂದರಷ್ಟು ಇಷ್ಟವಿಲ್ಲದಿದ್ದರೂ .....  

ಹೊರ ಜಗತ್ತಿನ ಅರಿವೇ ಇಲ್ಲದ ನನ್ನನ್ನು ಗುರುತು ಪರಿಚಯ ಇಲ್ಲದ ದೂರದ ಊರಿಗೆ ಕೊಟ್ಟು ಮದುವೆ ಮಾಡಿ ನಿಮ್ಮ ಜವಾಬ್ದಾರಿ ಕಳೆದು ಕೈ ತೊಳೆದುಕೊಳ್ಳಬೇಕು ಎಂಬುದಷ್ಟೇ ನಿಮ್ಮ ಜೀವನದ ಗುರಿ ಅಂತ ನೀವು ಬಿಡಿಸಿ ಹೇಳಿದಾಗಲೇ ನಿಮ್ಮ ನಿಜವಾದ ಭಾವನೆಗಳು ಅರ್ಥವಾದಾದದ್ದು.......

ಇರಲಿ ಬಿಡಿ ಎಲ್ಲಾ ನನ್ನ ಹಣೆಯ ಬರಹ....... ದೈವ ಚಿತ್ತ..... ಅವನ ನಿಯಮ ಮೀರಿ ಇಲ್ಲಿ ಹುಲ್ಲುಕಡ್ಡಿಯೂ ಅಲುಗದು ಅವ ನಡೆಸಿದಂತೆ ನಡೆವೆ.......

ಅಪ್ಪಾ ನೀವು ಮಾಡಿದ ತಪ್ಪಿಗಾಗಿ ಕೊರಗುತ್ತಾ ಕೂರುವುದಿಲ್ಲ  ನಿಮ್ಮ ಮೇಲಿನ ಕೋಪಕ್ಕೆ ನನ್ನನ್ನು ಮದುವೆಯಾದ ಹುಡುಗನ ಕನಸುಗಳನ್ನು ನಾ ಹಾಳು ಮಾಡಲು ಇಷ್ಟ ಪಡುವುದಿಲ್ಲ ತುಂಬಾ ಪ್ರೀತಿ ಮಮಕಾರಗಳಿಂದ  ಬದುಕನ್ನು ಮುನ್ನಡೆಸುತ್ತೇನೆ...........

ಕೊನೆಗೆ ಒಂದು ಮಾತು :-  ಅಪ್ಪಾ ಇನ್ನು ಮುಂದೆ ನಾ ನಿಮ್ಮ ಪಾಲಿಗೆ ಬದುಕಿದ್ದೂ ಸತ್ತಂತೆ......... 

4 comments:

  1. ಹೆತ್ತವರು ಕೈ ತೊಳೆದುಕೊಂಡರು, ಭಾರ ಇಳಿಸಿಕೊಂಡರು, ಜವಾಬ್ಧಾರಿ ನಿಭಾಯಿಸಿಬಿಟ್ಟರು ಎಂದು ಪ್ರತಿ ಮದುವೆಯಲ್ಲೂ ನಾವೂ ಉದ್ಘರಿಸಿತ್ತೇವೆ.
    ಆಕೆಯ ಒಳ ತೋಟಿಯನು ಅರಿಯದೇ, ಬರೀ ಸಾಮಾಜಿಕ ಜವಾಬ್ದಾರಿಯನು ನಿಭಾಯಿಸಿ ಬಿಟ್ಟರೆ. ಮುಂದೆ ಆಕೆ ಕ್ಷಣ ಕ್ಷಣವೂ ನೊಂದುಕೊಳ್ಳುವಳು ಎನ್ನುವ ಅತೀ ಸೂಕ್ಷ್ಮ ವಿಚಾರವನ್ನು ಇವರು ಅದೇಕೆ ಮರೆಯುವರೋ? :(

    ReplyDelete
  2. ಕಥೆಯ ಹಂದರ ಚೆನ್ನಾಗಿದೆ..
    ಹೆತ್ತವರು ಮಕ್ಕಳ ಮನಸ್ಸನ್ನು ಅರಿತು ನಡೆಯಬೇಕು ಎಂಬ ಅಂಶ ಇಷ್ಟವಾಯಿತು

    ReplyDelete
  3. ಒಳ ತೋಟಿ ಮನೋಜ್ಞವಾಗಿ ಮೂಡಿದೆ,,,,,,, ನೊಂದ ಹೆಣ್ಣಿನ ಮೌನ ಸಂವಾದ

    ReplyDelete
  4. Satish, vedane, mookavEdaneidu.....
    ishtavaaythu bareda reeti, innashtu baravaNige nimminda horabarali endu aashisuttene

    ReplyDelete